ಆಸ್ಪ್ರೆ -
ಗಿಡುಗನ ಜಾತಿಗೆ ಸೇರಿದ, ಮೀನು ಹಿಡಿಯುವ ಹಕ್ಕಿ. ಪ್ರಪಂಚದ ಬಹು ಭಾಗಗಳಲ್ಲಿ ವಾಸಿಸುತ್ತದೆ. ತನ್ನ ಜಾತಿ ಮತ್ತು ಕುಲಗಳನ್ನು ಪ್ರತಿನಿಧಿಸುತ್ತ ಈಗ ಉಳಿದುಕೊಂಡಿರುವ ಹಕ್ಕಿ ಇದೊಂದೇ. ಕೆನಡ, ಸಂಯುಕ್ತ ಸಂಸ್ಥಾನಗಳು ಮತ್ತು ಮೆಕ್ಸಿಕೊಗಳಲ್ಲಿ ವಿಶೇಷವಾಗಿದೆ. ಭಾರತದಲ್ಲಿ ಆಸ್ಟ್ರೆಯ ಹಕ್ಕಿಯ ಒಂದು ಪ್ರಭೇದ ಕಂಡುಬರುತ್ತದೆ. ಇದರ ವೈಜ್ಞಾನಿಕ ನಾಮಧ್ವಯ ಪಾಂಡಿಯನ್ ಹೇಲಿಯಾಟಿಸ್. ದಕ್ಷಿಣ ಅಮೆರಿಕದ ದಕ್ಷಿಣದ ತುದಿಗೆ ಹೋದಂತೆಲ್ಲ ಇದರ ಸುಳಿವು ಕಾಣದಾಗುತ್ತದೆ. ಮೀಂಚುಳ್ಳಿ (ನೋಡಿ) ಹೇಗೆ ಮೇಲಿಂದ ದುಮುಕಿ ಅಲೆಯೊಳಕ್ಕೆ ತೂರಿ ಮೀನುಗಳನ್ನು ಹಿಡಿಯುತ್ತದೋ ಹಾಗೆ ಈ ಹಕ್ಕಿಯೂ ವೇಗದಿಂದ ನೀರೊಳಕ್ಕೆ ಹಾರಿ ಮೀನುಗಳನ್ನು ಹಿಡಿಯುತ್ತದೆ. ಕೊಕ್ಕಿನ ಬಣ್ಣ ಕಪ್ಪು, ತಲೆ ನೀಲಿ, ಕಣ್ಣು ಹಳದಿ, ಮೇಲುಮೈ ಮತ್ತು ರೆಕ್ಕೆ ಕಪ್ಪು ಕಂದು, ಗದ್ದ ಮತ್ತು ಗಂಟಲು ಬಿಳುಪು. ಇದಕ್ಕೆ ಮನುಷ್ಯರನ್ನು ಕಂಡರೆ ಸ್ವಲ್ಪವೂ ಭಯವಿಲ್ಲ. ದೊಡ್ಡ ಮರಗಳ ತುದಿಯಲ್ಲಿ ಇವು ಗೂಡುಗಳನ್ನು ಕಡ್ಡಿಗಳಿಂದ ಕಟ್ಟುತ್ತದೆ. ಕಟ್ಟಿದ ಗೂಡನ್ನು ವರ್ಷೇ ವರ್ಷೇ ಬಲಮಾಡುತ್ತವೆ. ಅದೇ ಗೂಡುಗಳಲ್ಲಿ ವಾಸಿಸುತ್ತವೆ. ವರ್ಷಕ್ಕೆ ಒಂದೇ ಸೂಲು. ಮೊಟ್ಟೆ ಬೆಳೆಯಲು 21 ದಿನ ಬೇಕು. ಮಾಸಲು ಕಂದುಬಣ್ಣದ ಮೊಟ್ಟೆಗಳು ಚೆಲುವಾಗಿ ಕಾಣುತ್ತವೆ. ಮರಿಗಳು ಚಿಕ್ಕವಾಗಿರುವಾಗ ಅವುಗಳ ತಂದೆ ತಾಯಿಗಳು ಮೀನುಗಳನ್ನು ಎಳೆ ಎಳೆಯಾಗಿ ಬಿಡಿಸಿ ಅದಕ್ಕೆ ತಿನ್ನಿಸುತ್ತವೆ. ಅಳಿಯುತ್ತಿರುವ ಈ ಹಕ್ಕಿಗಳನ್ನು ಕಾಪಾಡಲು ಅಟ್ಟಾಂಟಿಕ್ ಸಮುದ್ರದ ಕರೆಯಲ್ಲಿ ತಕ್ಕ ಏರ್ಪಾಡು ಮಾಡಲಾಗಿದೆ. 				

									(ಪರಿಷ್ಕರಣೆ: ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ